ಏಹಾಡ್ರ್ಟ್‌, ಲುಡ್ವಿಗ್: (1897- ). ಜರ್ಮನಿಯ ಫೆಡರಲ್ ಗಣರಾಜ್ಯದ ಅಧ್ಯಕ್ಷ (ಛಾನ್ಸೆಲರ್) (1963-1966) ಆಗಿದ್ದವ. ಬವೇರಿಯದಲ್ಲಿದ್ದ ಜವಳಿ ವ್ಯಾಪಾರಿಯೊಬ್ಬನ ಮಗ. ಒಂದನೆಯ ಮಹಾಯುದ್ಧದಲ್ಲಿ ಭಾಗವಹಿಸಿ ಗಾಯಗೊಂಡು ದರ ಫಲವಾಗಿ ಕಸಬಿನ ಅರ್ಥಶಾಸ್ತ್ರಜ್ಞನಾದ. ಅಂದು ಪ್ರಬಲವಾಗಿದ್ದ ನಾಜಿ ಪಕ್ಷವನ್ನು ಸೇರಲು ಇಷ್ಟಪಡದ ಕಾರಣ ಇವನನ್ನು 1942ರಲ್ಲಿ ನಾಜಿಗಳು ತಮ್ಮ ಪಕ್ಷದಿಂದ ತೆಗೆದುಹಾಕಿದರು. ಅನಂತರ ಈತ ಔದ್ಯೋಗಿಕ ಸಂಶೋಧನಸಂಸ್ಥೆಯೊಂದನ್ನು ಸ್ಥಾಪಿಸಿದ. ದೊಡ್ಡ ರಾಜಕಾರಣಿಯಾದದ್ದರಿಂದ ಈತನನ್ನು ಬವೇರಿಯದ ಅರ್ಥಸಚಿವ ನನ್ನಾಗಿ ನೇಮಿಸಲಾಯಿತು (1945). ರಾಜ್ಯದ ರಾಜಕೀಯದಿಂದ 1947ರಲ್ಲಿ ಹೊರ ಬಂದು ಕ್ರಿಶ್ಚಿಯನ್ ಡೆಮೋಕ್ರೆಟಿಕ್ ಯೂನಿಯನನ್ನು ಸೇರಿ ಯಶಸ್ವೀ ಹಣಕಾಸಿನ ಸುಧಾರಣೆಗಳನ್ನು ಯೋಜಿಸಿದ (1948). ಇದಾದ ಒಂದು ವರ್ಷದಲ್ಲೇ ಆಗಿನ ಜರ್ಮನಿಯ ಅಧ್ಯಕ್ಷನಾಗಿದ್ದ ಕೊನ್ರಾಡ್ ಅಡೆನೋವರನ ಸಚಿವಸಂಪುಟವನ್ನು ಸೇರಿದ. 1957ರ ಚುನಾವಣೆಯಲ್ಲಿ ಪಶ್ಚಿಮ ಜರ್ಮನಿಯ ಉಪಾಧ್ಯಕ್ಷನಾಗಿಯೂ (ವೈಸ್ ಛಾನ್ಸೆಲರ್) ನೇಮಕಹೊಂದಿದ. ಅಡೆನೋವರ್ ರಾಜೀನಾಮೆಯನ್ನಿತ್ತಮೇಲೆ ಕ್ರಿಶ್ಚಿಯನ್ ಡೆಮೋಕ್ರ್ಯಾಟ್ ಆಗಿದ್ದ ಈತ ಅಧ್ಯಕ್ಷನಾದ (1963). ಈತನ ಅಧಿಕಾರಾವಧಿಯಲ್ಲಿ ಅನೇಕ ಸಾಮಾಜಿಕ ಸುಧಾರಣೆಗಳಾದುವು. ಹೊರನಾಡುಗಳಲ್ಲಿ ಅನಿರ್ಬಂಧಿತ ವ್ಯಾಪಾರ ತಾತ್ತ್ವಿಕವಾಗಿಯಾದರೂ ಮಿತಿಯಲ್ಲಿರಬೇಕೆಂಬುದು ಈತನ ಮತ. ಪಶ್ಚಿಮ ಜರ್ಮನಿಯ ಬೃಹದ್ ಆರ್ಥಿಕ ಪುನಶ್ಚೇತನಕ್ಕೆ ಈತನ ನಿರ್ದೇಶನ ಮತ್ತು ಸಹಾಯವೇ ಮುಖ್ಯಕಾರಣ. ಆದರೆ ಒಳಾಡಳಿತದಲ್ಲಿ ಶಕ್ತಿ ಕೇಂದ್ರೀಕರಣದ ಬಗ್ಗೆ ಇದ್ದ ತೀವ್ರಾಸಕ್ತಿ ಮತ್ತು ರಾಜಕೀಯ ಪುಡಾರಿತನಗಳಿಂದಾಗಿ ಈತ ಅನೇಕ ಆಕ್ಷೇಪಣೆಗಳಿಗೆ ಒಳಗಾದ. ಅಡೆನೋವರ್ 1966ರ ಮಾರ್ಚ್ವರೆಗೂ ಪಕ್ಷದ ಅಧ್ಯಕ್ಷನಾಗಿದ್ದ. ಅಡೆನೋವರನ ಅನಂತರ ಈತನೇ ಪಕ್ಷದ ಅಧ್ಯಕ್ಷನೂ ಆದ. 				         *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ